ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮತಿ, ಸಹಕಾರ..
ಶಿವಮೊಗ್ಗ : ನಗರದ ಇತಿಹಾಸ ಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಂಬಂಽಸಿದಂತೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ವಿವಿಧ ಇಲಾಖೆಯ ಅಧಿಕಾರಿಗಳು ಹೇಳಿದರು.
ಜಾತ್ರೆಯ ಅಂಗವಾಗಿ ದೇವಸ್ಥಾನದ ಅಡಳಿತ ಮಂಡಳಿ ಮತ್ತು ಮಹಾನಗರ ಪಾಲಿಕೆ , ರಕ್ಷಣಾ ಇಲಾಖೆ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಽಕಾರಿ ವರ್ಗದವರೊಂದಿಗೆ ನಡೆದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.
೨ ವರ್ಷಕ್ಕೊಮ್ಮೆ ನಡೆಯುವ ದೇವಿಯ ಉತ್ಸವಕ್ಕೆ ಪ್ರತಿಬಾರಿಯೂ ಕೂಡ ಬಂದಿರುವಂತಹ ಎಲ್ಲಾ ಇಲಾಖೆಯ ಅಽಕಾರಿ ವರ್ಗದವರು ಸಹಕಾರ ನೀಡಿದ್ದೀರಿ, ಈ ಬಾರಿಯೂ ಸಹ ನಿಮ್ಮ ಸಹಕಾರ ಮುಂದುವರೆಯಲಿ ಎಲ್ಲರೂ ಸೇರಿ ಸ್ನೇಹಮಯವಾದ ದೇವಿಯ ಉತ್ಸವವನ್ನು ಮಾಡೋಣ ಎಂದು ಮಾರಿಕಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು.
ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿ, ಈ ಹಿಂದೆ ನಡೆದ ಎಲ್ಲಾ ಜಾತ್ರೆಗಳ ಯಶಸ್ಸಿನಲ್ಲಿ ಈಗ ನೆರೆದಿರುವ ಇಲಾಖೆಗಳ ಪಾತ್ರ ಮಹತ್ವದ್ದಾಗಿದ. ಈ ಬಾರಿಯ ಜಾತ್ರಾ ಮಹೋತ್ಸವಕ್ಕೂ ಸಹ ನಿಮ್ಮ ಸಹಕಾರವನ್ನು ನಾವು ಅಪೇಕ್ಷಿಸುತ್ತೇವೆ. ನಿಮಗೆ ಬೇಕಾದಂತಹ ಹಾಗೂ ನೀವು ಹೇಳುವಂತಹ ಎಲ್ಲಾ ಸೂಚನೆಗಳು ಹಾಗೂ ಅವಶ್ಯಕತೆಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಪೂರೈಸುತ್ತದೆ ಎಂದರು.
ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಇದು ನಮ್ಮೂರಿನ ಹಬ್ಬ ಈ ಹಿಂದೆ ಆಯುಕ್ತನಾಗಿದ್ದಾಗ ೨ ಜಾತ್ರೆ ಮಾಡಿದ ಅನುಭವವಿದೆ. ಅದರ ಆಧಾರದ ಮೇಲೆ ಈ ಬಾರಿಯ ದೇವಿ ಉತ್ಸವಕ್ಕೆ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸ್ವಚ್ಚತಾ ಕಾರ್ಯಕ್ಕಾಗಿ ಗ್ರಾಮೀಣ ಭಾಗದಿಂದ ೬೦ ಜನರ ತಂಡವನ್ನು ಕರೆಸಿಕೊಳ್ಳಲಾಗಿದೆ. ಅವರುಗಳಿಗೆ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗಿದೆ. ೩೦ ಜನರಿರುವ ೨ ತಂಡಗಳನ್ನು ರಚಿಸಲಾಗಿದ್ದು, ಇವರುಗಳು ಸ್ವಚ್ಚತಾ ಕಾರ್ಯದಿಂದ ಆರಂಭಗೊಂಡು ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಲಿದ್ದಾರೆ. ಪಾಲಿಕೆ ಸಿಬ್ಬಂದಿಗಳು ಊರ ಹಬ್ಬವಾಗಿರುವುದರಿಂದ ಈ ಕೆಲಸದಲ್ಲಿ ತೊಡಗಲು ಆಗುತ್ತಿಲ್ಲ. ಅವರುಗಳು ಸಹ ಹಬ್ಬವನ್ನು ಆಚರಿಸಲಿ ಎಂಬ ಉದ್ದೇಶದಿಂದ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ತಾಂತ್ರಿಕ ಕಾರಣಗಳಿಂದ ಅಡಚಣೆ ಉಂಟಾದರೆ ಪ್ರತಿ ವಾರ್ಡ್‌ಗೆ ೩ ಟ್ಯಾಂಕರ್‌ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಶೌಚಾಲಯ , ಸಂಚಾರಿ ಶೌಚಾಲಯ ಎಲ್ಲವನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ಗಂಟೆಗೊಮ್ಮೆ ಇವುಗಳ ಸ್ವಚ್ಚತಾ ಕಾರ್ಯಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಪಾಲಿಕೆಯಲ್ಲಿ ಇವೆಲ್ಲದಕ್ಕಾಗಿ ೨೪ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಮ್ ಕಾರ್ಯ ನಿರ್ವಹಿಸಲಿದೆ ಎಂದರು.
ಜನಸಂದಣಿ ಇರುವ ಕಡೆ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ. ಅಲ್ಲದೇ ವಾಚ್‌ಟವರ್‌ಗಳನ್ನು ನಿರ್ಮಿಸಿಕೊಡಲಾಗುತ್ತದೆ. ಒಟ್ಟಾರೆ ಜಾತ್ರೆಯ ಯಶಸ್ಸಿಗೆ ಬೇಕಾದಂತಹ ಎಲ್ಲಾ ರೀತಿಯ ಕ್ರಮಗಳನ್ನು ಪಾಲಿಕೆ ನೀಡಲಿದೆ ಎಂದು ಹೇಳಿದರು.
ಡಿವೈಎಸ್ಪಿ ಬಾಬು ಅಂಜನಪ್ಪ ಮಾತನಾಡಿ, ರಕ್ಷಣಾ ಕಾರ್ಯಕ್ಕೆ ಇಲಾಖೆ ವತಿಯಿಂದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು. ೩ ಅಗ್ನಿ ಶಾಮಕ ವಾಹನಗಳನ್ನು ಬಳಸಿಕೊಳ್ಳಲಾಗುವುದು. ಎನ್‌ಸಿಸಿ ವಿದ್ಯಾರ್ಥಿಗಳು ಸಹ ನಮ್ಮ ಜೊತೆ ಕಾರ್ಯ ನಿರ್ವಹಿಸಲಿದ್ದಾರೆ. ಪಾಲಿಕೆಯ ಸಹಕಾರದೊಂದಿಗೆ ರಕ್ಷಣಾ ಇಲಾಖೆ ಬಂದೋಬಸ್ತ್ ಕಾರ್ಯವನ್ನು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನಿರ್ವಹಿಸಲಾಗಿದೆ ಎಂದರು.
ಸಭೆಯಲ್ಲಿ ಪಾಲಿಕೆಯ ವಿವಿಧ ವಿಭಾಗದ ಅಧಿಕಾರಿಗಳು, ರಕ್ಷಣಾ ಇಲಾಖೆಯ ಹರೀಶ್ ಪಾಟೀಲ್, ರವಿ ಪಾಟೀಲ, ಸಂತೋಷ್ ಹಾಗೂ ಮಾರಿಕಾಂಬಾ ಸೇವಾ ಸಮಿತಿಯ ಪದಾಽಕಾರಿಗಳು ಉಪಸ್ಥಿತರಿದ್ದರು.
ಮಹಾನಗರ ಪಾಲಿಕೆ ವತಿಯಿಂದ ಮಾರಿಕಾಂಬಾ ಸೇವಾ ಸಮಿತಿಗೆ ೧೦ ಲಕ್ಷ ರೂ.ಗಳ ದೇಣಿಗೆ ಚೆಕ್‌ನ್ನು ಆಯುಕ್ತ ಮಾಯಣ್ಣಗೌಡ ಹಾಗೂ ಇತರರು ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ರವರಿಗೆ ನೀಡಿದರು.

