ಸಿಇಟಿ ಕೇಂದ್ರದಲ್ಲಿ ಜನಿವಾರ ಕತ್ತರಿಸಿದ ಪ್ರಕರಣ: ಬ್ರಾಹ್ಮಣ ಮಹಾಸಭಾದಿಂದ ದೂರು ದಾಖಲು
ಶಿವಮೊಗ್ಗ: ಇಲ್ಲಿನ ಆದಿಚುಂಚನಗಿರಿ ವಿದ್ಯಾಸಂಸ್ಥೆಯ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ್ ಕಟ್ ಮಾಡಿದ ಆರೋಪ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಕುರಿತು ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಮಾತನಾಡಿ, ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ಪರೀಕ್ಷೆ ವೇಳೆ ತಪಾಸಣೆ ನಡೆಸುವ ನೆಪದಲ್ಲಿ ಇಬ್ಬರು ವಿದ್ಯಾರ್ಥಿಗಳ ಯಜ್ಞೋಪವಿತ ಜನಿವಾರವನ್ನು ತುಂಡರಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ. ಮೂರನೇ ವಿದ್ಯಾರ್ಥಿಗೆ ಇದೇ ರೀತಿ ಮಾಡಿದಾಗ ಆತ ವಿರೋಧ ಮಾಡಿದಾಗ ಆತನನ್ನು ಹಾಗೆಯೇ ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿದ್ದಾರೆ. ಜನಿವಾರ ತುಂಡು ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ದೂರಿದರು.
ಬ್ರಾಹ್ಮಣ ಸಮಾಜದಲ್ಲಿ ನಮ್ಮ ಸಂಸ್ಕೃತಿಯ ಭಾಗ ಯಜ್ಞೋಪ ವೀತ. ಹುಟ್ಟಿದ ತಕ್ಷಣ ಯಾರೂ ಬ್ರಾಹ್ಮಣ ಆಗಲ್ಲ. ಬ್ರಹ್ಮೋಪದೇಶ ಮಾಡಿದಾಗ ಎರಡನೇ ಜನ್ಮ ಬರುತ್ತದೆ ಎಂಬ ನಂಬಿಕೆ ಇದೆ. ಆಗ ಆತನಿಗೆ ದ್ವಿಜ ಎಂದು ಕರೆಯುತ್ತಾರೆ. ಒಮ್ಮೆ ಬ್ರಹ್ಮೋಪದೇಶವಾದ ನಂತರ ಆತ ಸಾಯುವ ತನಕ ಜನಿವಾರವನ್ನು ತೆಗೆಯುವುದಿಲ್ಲ. ಜನಿವಾರ ಕಟ್ ಮಾಡಿರುವುದು ನಮ್ಮ ಧಾರ್ಮಿಕ ಭಾವನೆಗೆ ದೊಡ್ಡ ಧಕ್ಕೆಯಾಗಿದೆ ಎಂದರು.
ಈ ಕುರಿತು ಡಿಸಿ ಅವರಿಗೆ ಮನವಿ ಮಾಡಲಾಗಿತ್ತು. ಅವರು ಒಂದು ವಾರದ ಕಾಲಾವಧಿ ಕೇಳಿದ್ದರು. ಆದರೆ ನಮ್ಮ ದೂರು ಆಧರಿಸಿ ಇಂದು ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯಿದೆಯಂತೆ 115/2, 298, 299, 352, 551/1 ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

