ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ನಿಧನ..
ನವದೆಹಲಿ, ಡಿ.26-ಮಾಜಿ ಪ್ರಧಾನಿ ಹಾಗೂ ಆರ್ಥಿಕ ಸುಧಾರಣೆಯ ಹರಿಕಾರ. ಮನಮೋಹನ್ ಸಿಂಗ್ ಅವರು ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸಿಂಗ್ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕಾರಣ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದರು.
ಮನಮೋಹನ್ ಸಿಂಗ್ ಅವರು 1991-96ರ ಅವಧಿಯಲ್ಲಿ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ದೇಶದ ಹಣಕಾಸು ಸಚಿವರಾಗಿ ಪ್ರಾಮುಖ್ಯತೆಯನ್ನು ಗಳಿಸಿದರು. ಆರ್ಥಿಕತೆಯನ್ನು ಪರಿವರ್ತಿಸುವ ವ್ಯಾಪಕ ಸುಧಾರಣೆಗಳನ್ನು ತರುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.
ಯುಪಿಎಯ ಎರಡು ಅವಧಿಯ ಪ್ರಧಾನಿಯಾಗಿ ಅವರು (2004 ಮತ್ತು 2014) ಸೇವೆ ಸಲ್ಲಿಸಿದರು. ಈ ವರ್ಷದ (2024) ಆರಂಭದ ವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಏಪ್ರಿಲ್ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು. ಗಾಂಧಿ ಕುಟುಂಬ ಹೊರತು ಪಡಿಸಿ ಕಾಂಗ್ರೆಸ್ನಲ್ಲಿ ಹೆಚ್ಚು ಅವಧಿಯ ಪ್ರಧಾನಿ ಆಗಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1990 ರಲ್ಲಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಮನಮೋಹನ್ ಸಿಂಗ್ ಹೊಸ ದಿಕ್ಕು ತೋರಿಸಿದ್ದರ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ.
ಆರು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಸಿಂಗ್, ಒಮ್ಮೆಯೂ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಲಿಲ್ಲ. 1999 ರಲ್ಲಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸಿಂಗ್, ಬಿಜೆಪಿಯ ವಿಜಯ್ ಕುಮಾರ್ ಮಲ್ಹೋತ್ರ ವಿರುದ್ಧ ಪರಾಭವ ಗೊಂಡಿದ್ದರು