ಕೃಷಿ ವಿವಿ ನಿರ್ದೇಶಕರಾಗಿ
ಹೆಚ್.ಡಿ. ದೇವಿಕುಮಾರ್ ನೇಮಕ
ಶಿವಮೊಗ್ಗ : ಇಲ್ಲಿನ ನವುಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯದ ಆಡಳಿತ ಮಂಡಳಿ ನಿರ್ದೇಶಕರನ್ನಾಗಿ ಶಿವಮೊಗ್ಗ ತಾಲೂಕು ಹೊಳೆಹನಸವಾಡಿ ನಿವಾಸಿ ಹೆಚ್.ಡಿ. ದೇವಿಕುಮಾರ್ ಅವರನ್ನು ಸರ್ಕಾರ ನೇಮಕ ಮಾಡಿದೆ.ಈ ಸಂಬAಧ ರಾಜ್ಯಪಾಲರ ಸಚಿವಾಲಯದಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸರ್ಕಾರವು ಮೂವರನ್ನು ನೇಮಕ ಮಾಡಿದ್ದು, ಈ ಪೈಕಿ ದೇವಿಕುಮಾರ್ ಕೂಡ ಒಬ್ಬರಾಗಿದ್ದಾರೆ. ಮುಂದಿನ ಮೂರು ವರ್ಷದ ಅವಧಿಗೆ ಅವರು ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರೂ ಆಗಿರುವ ದೇವಿಕುಮಾರ್ ಅವರು ಈ ಹಿಂದೆ ರಾಜ್ಯ ಭೋವಿ ಅಭಿವೃದ್ದಿ ನಿಗಮದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಸೇವೆ ಜತೆಗೆ ಪ್ರಗತಿಪರ ರೈತರಾಗಿಯೂ ಗುರುತಿಸಿಕೊಂಡಿರುವ ಅವರನ್ನು ಸರ್ಕಾರ ಈಗ ಕೃಷಿ ವಿಶ್ವ ವಿದ್ಯಾನಿಲಯದ ಆಡಳಿತ ಮಂಡಳಿ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದು, ಅವರ ಬಹುಮುಖಿ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ.

