ಕಾಣೆಯಾಗಿದ್ದ ನಾಯಿ ಜಾಲತಾಣದಿಂದ ಪತ್ತೆ…
ಹಾವೇರಿ: ಇಲ್ಲಿನ ಪಟ್ಟಣ ಗುಡಿಸಲಗೇರಿಯ ಬಸವರಾಜ ಜಾಬೀನನವರದು ತುಂಬು ಕುಟುಂಬ. ಈ ಕುಟುಂಬಕ್ಕೆ ಕಳೆದ ನಾಲ್ಕು ವರ್ಷಗಳ ಹಿಂದೆ ಪಗ್ ಜಾತಿಯ ಹೆಣ್ಣು ಶ್ವಾನ ಸೇರ್ಪಡೆಯಾಗಿತ್ತು. ಇದಕ್ಕೆ ಮನೆ ಸದಸ್ಯರು ಪ್ರೀತಿಯಿಂದ ’ಟಾಫಿ’ ಎಂದು ಹೆಸರಿಟ್ಟಿದ್ದರು.ಮನೆಯವರೊಂದಿಗೆ ಟಾಫಿ ಸದಸ್ಯಳಾದಳು. ಆಕೆ ಮನೆಗೆ ಬಂದಿದ್ದೇ ಬಂದಿದ್ದು, ಮನೆಗೆ ಅದೃಷ್ಟ ದೇವತೆಯೇ ಬಂದಂತಾಗಿತ್ತು.
ಮನೆಯಲ್ಲಿ ಆಕೆಯನ್ನು ಬಿಟ್ಟಿರಲಾರದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಅವರು ಬೇರೆ ಊರಿಗೆ ಹೋಗಬೇಕೆಂದಾಗ ಎಲ್ಲಿಲ್ಲದ ಸಂಕಟ. ಟಾಫಿಯನ್ನು ಬಿಟ್ಟು ಹೋಗಲು ಆಗುವುದಿಲ್ಲ, ಕರೆದುಕೊಂಡು ಹೋಗಲೂ ಆಗುವುದಿಲ್ಲ ಎಂಬ ಸಂಕಟ . ಹೀಗಿದ್ದಾಗ ಹಾವೇರಿಯಲ್ಲಿರುವ ತಮ್ಮ ನೆಂಟರ ಮನೆಯಲ್ಲಿ, ಪರಿಚಯದವರ ಮನೆಯಲ್ಲಿ ಟಾಫಿಯನ್ನು ಬಿಟ್ಟು ಹೋಗುತ್ತಿದ್ದರು. ಆದರೆ, ಟಾಫಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಹುಡುಕಿ, ಹುಡುಕಿ ಸುಸ್ತಾದ ಬಸವರಾಜ್ ಜಾಬೀನ ಮನೆಯ ಸದಸ್ಯರು ಪೊಲೀಸರಿಗೆ ದೂರು ನೀಡಿದರು. ಇತ್ತ ಕೆಲ ಸದಸ್ಯರು ಟಾಫಿಗಾಗಿ ಜ್ಯೋತಿಷಿಗಳ ಮೊರೆ ಕೂಡ ಹೋದರು.
ನಾಲ್ಕು ವರ್ಷಗಳಲ್ಲಿ ೧೪ ಮರಿ ಕೊಟ್ಟಿರುವ ಟಾಫಿ ಮೂರು ದಿನಗಳಿಂದ ಟಾಫಿ ಇಲ್ಲದೇ ಮನೆ ಬಿಕೋ ಎನ್ನುತ್ತಿತ್ತು. ಮನೆ ಸದಸ್ಯರೆಲ್ಲರೂ ಏನೋ ಕಳೆದುಕೊಂಡಂತೆ ತಲೆಯ ಮೇಲೆ ಕೈಹೊತ್ತು ಕುಳಿತದರು. ಅನ್ನ, ಆಹಾರ, ನೀರು ಬಿಟ್ಟು ಟಾಫಿಗಾಗಿ ಎದುರು ನೋಡುತ್ತಿದ್ದರು. ಇತ್ತ ಬಸವರಾಜ್ ಟಾಫಿ ಕಳೆದಿರುವ ಕುರಿತಂತೆ ವಾಟ್ಸ್‌ಆಪ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಿದರು.

