ಸೂಡಾ ಅತಿಕ್ರಮಣ: ರೈತರು ಆತಂಕ, -ಸ.ನಂ 156 ಜಮೀನು ಸಾಗುವಳಿದಾರರಿಂದ ಸಚಿವರಿಗೆ ಮನವಿ

ರಾಜ್ಯ ಶಿವಮೊಗ್ಗ
ಸೂಡಾ ಅತಿಕ್ರಮಣ: ರೈತರು ಆತಂಕ
ಸ.ನಂ 156 ಜಮೀನು ಸಾಗುವಳಿದಾರರಿಂದ ಸಚಿವರಿಗೆ ಮನವಿ
ಶಿವಮೊಗ್ಗ: ಸೂಡಾದಿಂದ ತಾಲ್ಲೂಕಿನ ಸೋಗಾನೆ ಸಮೀಪ 156 ನೇ ಸರ್ವೆ ನಂಬರ್‌ ಸಾಗುವಳಿ ಜಮೀನನ್ನು ವಶಪಡಿಸಿಕೊಳ್ಳಲು ಉದ್ದೇಶಿಸಿರುವುದನ್ನು ಕೈಬಿಡುವಂತೆ ಒತ್ತಾಯಿಸಿ ರೈತರು ಶಿವಮೊಗ್ಗ ಜಿಲ್ಲಾ ಹಾಪ್‌ ಕಾಮ್ಸ್ ಅಧ್ಯಕ್ಷರಾದ ಆರ್.ವಿಜಯಕುಮಾರ್ ನೇತೃತ್ವದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ತಾಲ್ಲೂಕು ನಿಧಿಗೆ ಹೋಬಳಿ ಸೋಗಾನೆ ಸಮೀಪದ 156 ನೇ ಸರ್ವೇ ನಂಬರ್ ಜಮೀನಿನಲ್ಲಿ ನೂರಾರು ರೈತರು ಅಡಿಕೆ, ತೆಂಗು, ರಾಗಿ, ಭತ್ತ ಬೆಳೆಯುತ್ತಾ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಇಲ್ಲಿನ ಬಹುತೇಕ ರೈತರು ಈ ಹಿಂದೆ ವಿಮಾನ ನಿಲ್ದಾಣ, ಕೇಂದ್ರ ಕಾರಾಗೃಹ, ಕೆಇಬಿ, ಮದ್ಯಪಾನೀಯ, ಆಹಾರ ನಿಗಮ, ಕೆಎಚ್‌ಬಿ ಹೀಗೆ ಹಲವು ಉದ್ದೇಶಗಳಿಗಾಗಿ ತಮ್ಮ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ. ಇದೀಗ ಸೂಡಾದವರು 156 ನೇ ಸರ್ವೆ ನಂಬರ್ ಜಾಗವನ್ನು ವಶಪಡಿಸಿಕೊಳ್ಳುವ ಬಗ್ಗೆ ತಿಳಿಸಿರುವುದು ಆತಂಕವನ್ನುಂಟು ಮಾಡಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಸೂಡಾ ಕಚೇರಿಯಲ್ಲಿ ಸಭೆ ನಡೆಸಿ ತಮ್ಮ ಜಮೀನುಗಳನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ಇಲ್ಲಿನ ರೈತರಿಗೆ ಆಶ್ವಾಸನೆ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಪತ್ರಿಕಾಗೋಷ್ಠಿ ನಡೆಸಿ 156 ಸ.ನಂ ಜಮೀನುಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಸಿದ್ದತೆ ನಡೆಸಿರುವುದು ತಿಳಿದು ಬಂದಿದೆ. ಇದರಿಂದ ಸುಮಾರು 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರು ಬೀದಿಗೆ ಬೀಳಬೇಕಾಗುತ್ತದೆ ಎಂದು ಸಚಿವರ ಎದುರು ರೈತರು ತಮ್ಮ ಅಳಲು ತೋಡಿಕೊಂಡರು.
ಈ ವೇಳೆ ಸೋಗಾನೆ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಸಾಗರ್, ಯುವ ಮುಖಂಡ ಅರುಣ್ ನಾಯ್ಡು, ರೈತರಾದ ಚೆಲುವ, ನಾಗರಾಜ್, ಚಂದ್ರಣ್ಣ, ಕೃಷ್ಣ, ಕುಮಾರ್, ಗಿರೀಶ್, ಮಹಾದೇವಮ್ಮ, ಮುತ್ತಣ್ಣ, ಶಿವಮೂರ್ತಿ, ಶಿವಣ್ಣ, ಹೊನ್ನಪ್ಪ, ಪರಮೇಶ್ವರ, ನಟರಾಜ, ರವಿ, ಲೋಕೇಶ್, ಚಿನ್ನಪ್ಪ ಮತ್ತಿತರರಿದ್ದರು.