ಶರಾವತಿ ಹಿನ್ನೀರಿನ ಸಂತ್ರಸ್ಥರ 6 ದಶಕಗಳ ಕನಸು ನನಸಾಗುವ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯ ಲೋಕಾರ್ಪಣೆ.
ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ಶರಾವತಿ ಹಿನ್ನೀರಿನ ಸಂತ್ರಸ್ಥರ ಬವಣೆ ನೀಗಿಸಲು ಪಣತೊಟ್ಟು ಅವರ ಪ್ರಯತ್ನದಿಂದ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದೀಜಿ ಹಾಗೂ ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರಿಗೆ ಸೇತುವೆಯ ಅಗತ್ಯತೆ ಕುರಿತು ಮನವರಿಕೆ ಮಾಡಿದ ಪ್ರಯತ್ನವಾಗಿ ಶರಾವತಿ ಹಿನ್ನೀರಿಗೆ ಅಂಬಾರಗೋಡ್ಲು ಮತ್ತು ಕಳಸವಳ್ಳಿ ಮಧ್ಯೆ ನಿರ್ಮಾಣಗೊಂಡ ವಿನೂತನ ವಿನ್ಯಾಸದ ಸೇತುವೆಯ ಕಾಮಗಾರಿ ಪೂರ್ಣಗೊಂಡು ದಿನಾಂಕ: 14.07.2025 ರಂದು ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಗೊಳಿಸಲು ಸಮಯ ನಿಗಧಿಗೊಳಿಸಿದೆ ಎಂದು ತಿಳಿಸಲು ಅತ್ಯಂತ ಹರ್ಷ ವ್ಯಕ್ತಪಡಿಸುತ್ತೇವೆ.
ಶ್ರೀ ಬಿ.ಎಸ್ ಯಡಿಯೂರಪ್ಪನವರು ಸಂಸದರಾಗಿದ್ದ ಅವಧಿಯಲ್ಲಿ ಕೈಗೊಂಡ ಕ್ರಮದ ವಿವರ.
1964 ರಲ್ಲಿ ನಿರ್ಮಿಸಲಾದ ಲಿಂಗನಮಕ್ಕಿ ಅಣೆಕಟ್ಟಿನ ಪರಿಣಾಮವಾಗಿ ಸಾಗರ ಹೊಸನಗರ ಭಾಗದ ಅನೇಕ ಗ್ರಾಮಗಳಿಗೆ ಸಂಪರ್ಕ ರಸ್ತೆಗಳು ಮುಳುಗಡೆಯಾದ ಪ್ರಯುಕ್ತ ಅಂದಿನಿಂದ 2008 ನೇ ಇಸವಿಯವರೆಗೆ ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾದ ಸಂತ್ರಸ್ಥರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಶರಾವತಿ ಹಿನ್ನೀರಿಗೆ ಅಂಬಾರಗೋಡು ಮತ್ತು ಕಳಸವಳ್ಳಿ ಮಧ್ಯೆ ಸೇತುವೆ ನಿರ್ಮಾಣ ಮಾಡಲು ಅನೇಕ ಹೋರಾಟಗಳು ನಡೆಯುತ್ತಿರುವುದನ್ನು ಗಮನಿಸಿದ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು ಸೇತುವೆ ನಿರ್ಮಾಣ ಮಾಡಲು ತೀರ್ಮಾನಿಸಿ ರೂ 100.00 ಕೋಟಿಗಳ ಅನುದಾನವನ್ನು ಮಂಜೂರು ಮಾಡಿ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಲು ಸೂಚಿಸಿರುತ್ತಾರೆ.
ಇದರ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಮಗಾರಿಗೆ ಮೀಸಲಿಟ್ಟ ಅನುದಾನ ಸಾಕಾಗದೇ ಇರುವುದರಿಂದ ಸೇತುವೆ ನಿರ್ಮಾಣ ರಾಜ್ಯ ಸರ್ಕಾರದಿಂದ ತೆಗೆದುಕೊಳ್ಳಲು ಸಾಧ್ಯವಾಗಿರುವುದಿಲ್ಲ.
2014 ರಲ್ಲಿ ಶ್ರೀ ಬಿ.ಎಸ್ ಯಡಿಯೂರಪ್ಪನವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ನಂತರ ಬೈಂದೂರಿನಿಂದ ರಾಣೆಬೆನ್ನೂರಿಗೆ ಹೋಗುವ ಹಲವಾರು ರಾಜ್ಯ ಹೆದ್ದಾರಿಗಳನ್ನು ಸೇರಿಸಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಿದ ಪ್ರಯತ್ನದಿಂದ ಸದರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ 766-C ಎಂದು ಕೇಂದ್ರ ಸರ್ಕಾರವು ಘೋಷಣೆ ಮಾಡಿರುತ್ತದೆ.
ನಂತರದಲ್ಲಿ ಶ್ರೀ ಬಿ.ಎಸ್. ಯಡಿಯೂರಪ್ಪನವರು 10.03.2016 ರಂದು ಕೇಂದ್ರ ಭೂಸಾರಿಗೆ ಸಚಿವರಿಗೆ ಅಂಬಾರಗೋಡು-ಕಳಸವಳ್ಳಿ ಮಧ್ಯೆ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣದ ಅಗತ್ಯತೆಯ ಬಗ್ಗೆ ವಿವರಿಸಿ ಸೇತುವೆ ಮಂಜೂರು ಮಾಡಿಕೊಡಲು ಕೋರಿದ ಮೇರೆಗೆ ಹಾಗೂ ರಾಜ್ಯ ಸರ್ಕಾರದಿಂದ ಸದರಿ ಸೇತುವೆ ನಿರ್ಮಾಣದ ಸಂಬಂಧ ಸಾಗರದಿಂದ-
ಆವಿನಹಳ್ಳಿ ಹೊಳೆಬಾಗಿಲು-ಕಳಸವಳ್ಳಿ-ಸಿಗಂದೂರು-ಮರಕುಟಕ ವರೆಗಿನ ಜಿಲ್ಲಾ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪ್ರಸ್ತಾವನೆಯನ್ನು ಸಮುಚಿತ ಮಾರ್ಗದಲ್ಲಿ ಸಲ್ಲಿಸಲಾಗಿರುತ್ತದೆ.

ಶ್ರೀ ಬಿ ಎಸ್ ಯಡಿಯೂರಪ್ಪನವರ ಕೋರಿಕೆ ಮೇರೆಗೆ ಕೇಂದ್ರ ಭೂಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರು ಸಿಗಂದೂರು ಸೇತುವೆ ನಿರ್ಮಾಣಕ್ಕೆ ಅಗತ್ಯ ಇರುವ ರೂ 603.00 ಕೋಟಿಗಳ ಅನುದಾನವನ್ನು 2017-18 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಮಂಜೂರು ಮಾಡಿರುತ್ತಾರೆ. ಹಾಗೂ ರಾಜ್ಯ ಸರ್ಕಾರಕ್ಕೆ ಸೇತುವೆಯ ಯೋಜನಾ ವರದಿಯನ್ನು (Detailed Project Report) ತಯಾರಿಸಿ ಸಲ್ಲಿಸಲು ಸೂಚಿಸಿರುತ್ತಾರೆ.
ಅದರಂತೆ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಇಂಜಿನಿಯರ್ ಯೋಜನಾ ವರದಿಯನ್ನು ತಯಾರಿಸಿ 2017 ರ ಮೇ ತಿಂಗಳಲ್ಲಿ ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಿರುತ್ತಾರೆ.ಸದರಿ ಯೋಜನಾ ವರದಿಯ ಪ್ರಸ್ತಾವನೆಯನ್ನು ಪರಿಶೀಲಿಸಿದ ಕೇಂದ್ರ ಭೂ ಸಾರಿಗೆ ಮಂತ್ರಾಲಯವು ಸದರಿ ಸೇತುವೆಯು ರಾಷ್ಟ್ರೀಯ ಹೆದ್ದಾರಿಯಡಿ ಬರುವುದಿಲ್ಲವೆಂದು ತಿಳಿಸಿ ಹಿಂದಿರುಗಿಸಿದಾಗ, ಶ್ರೀ ಬಿ ಎಸ್ ಯಡಿಯೂರಪ್ಪನವರು ಸಾಗರದಿಂದ ಮರಕುಟಕ ಸೇರುವ ಜಿಲ್ಲಾ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೇಗೇರಿಸಲು ಕೇಂದ್ರ ಭೂಸಾರಿಗೆ ಮಂತ್ರಾಲಯ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಪ್ರಯುಕ್ತ 2018 ರಲ್ಲಿ ಸದರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 369-E ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿ ಸೇತುವೆ ನಿರ್ಮಾಣದ ಯೋಜನಾ ವರದಿಯನ್ನು ಮರು ಸಲ್ಲಿಸಲು ಸೂಚಿಸಿರುತ್ತಾರೆ.
2018 ರ ಫೆಬ್ರವರಿ 19 ರಂದು ಸೇತುವೆಯ ಯೋಜನಾ ವರದಿಗೆ ಮಂಜೂರಾತಿ ನೀಡುವ ನಿರೀಕ್ಷಣೆಯ ಮೇರೆಗೆ ಸೇತುವೆ ಕಾಮಗಾರಿಯ ಶಂಕುಸ್ಥಾಪನೆಯನ್ನು ರಾಷ್ಟ್ರೀಯ ಹೆದ್ದಾರಿ 206 ತುಮಕೂರಿನಿಂದ, ಶಿವಮೊಗ್ಗ ವರೆಗಿನ 4 ಪಥದ ರಸ್ತೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯೊಂದಿಗೆ ಸೇತುವೆ ನಿರ್ಮಾಣ ಸ್ಥಳದಲ್ಲಿ ಕೇಂದ್ರ ಭೂರಿಗೆ ಮಂತ್ರಾಲಯದ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರ ಅಮೃತ ಹಸ್ತದಿಂದ ನೆರವೇರಿಸಲಾಗಿರುತ್ತದೆ.
ಶಂಕುಸ್ಥಾಪನೆ ಮಾಡಿದ ನಂತರದಲ್ಲಿ ಸದರಿ ಸೇತುವೆ ನಿರ್ಮಾಣದ ಸ್ಥಳವು ವನ್ಯಜೀವಿ ವಿಭಾಗದಡಿ (Wildlife) ಬರುತ್ತಿದ್ದು, ವನ್ಯಜೀವಿ ಮಂಡಳಿಯಿಂದ ಅನುಮೋದನೆ ಪಡೆದ ನಂತರ ಸೇತುವೆಯ ಯೋಜನಾ ವರದಿಯ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿ ಯೋಜನಾ ವರದಿಯನ್ನು ಪುನ: ಹಿಂದಿರುಗಿಸಿರುತ್ತಾರೆ. ಹಾಗೂ ಸದರಿ ಸೇತುವೆ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನವನ್ನು ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಹಾಸನ ಜಿಲ್ಲೆಯ ರಸ್ತೆಗಳಿಗೆ ನೀಡಿ ಅನುಮೋದನೆ ನೀಡಿರುತ್ತಾರೆ. ಇದರ ಮಧ್ಯೆ ಲೋಕಸಭೆಗೆ ಉಪ ಚುನಾವಣೆ ನಡೆಯಿತು.
ಶ್ರೀ ಬಿ.ವೈ. ರಾಘವೇಂದ್ರರವರು ಸಂಸದರಾದ ನಂತರ ಕೈಗೊಂಡ ಕ್ರಮದ ವಿವರ.
ಶ್ರೀ ಬಿ.ವೈ ರಾಘವೇಂದ್ರ ಇವರು ಸಂಸದರಾಗಿ ಆಯ್ಕೆಯಾದ ನಂತರ ಸದರಿ ಸೇತುವೆಗೆ ಮಂಜೂರಾತಿ ಪಡೆಯಲು ಅಗತ್ಯವಿರುವ ವನ್ಯಜೀವಿ ಮಂಡಳಿಯಿಂದ ಅರಣ್ಯ ಬಿಡುಗಡೆಯ ಪ್ರಸ್ತಾವನೆಗೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರದ ಸಂಬಂಧಪಟ್ಟ ಎಲ್ಲಾ ವನ್ಯ ಜೀವಿ ಅರಣ್ಯ ಕಛೇರಿಗಳಗೆ ಭೇಟಿ ನೀಡಿ ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಿ ಸಲ್ಲಿಸಲು ಕೋರಿದ ಮೇರೆಗೆ, ಪ್ರಸ್ತಾವನೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ನಂತರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರ ಪ್ರಯತ್ನದಿಂದ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಶಿಫಾರಸ್ಸು ಮಾಡಿ ಕೇಂದ್ರ ಅರಣ್ಯ ಮತ್ತು ಪರಿಸರ ಮಂಡಳಿ, ನವದೆಹಲಿಗೆ ಜನವರಿ 2019 ರಲ್ಲಿ ಸಲ್ಲಿಸಲಾಗಿರುತ್ತದೆ.
ಸೇತುವೆ ನಿರ್ಮಾಣದ ಹಿನ್ನೀರಿನ ಪ್ರದೇಶವು ಕರ್ನಾಟಕ ಪವರ್ ಕಾರ್ಪೋರೇಷನ್ (KPTCL) ಗೆ ಸೇರಿದ್ದು, ಸೇತುವೆ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರವನ್ನು ಕೋರಿ ರಾಷ್ಟ್ರೀಯ ಹೆದ್ದಾರಿ ವಿಭಾಗವು ಪ್ರಸ್ತಾವನೆ ಸಲ್ಲಿಸಿದ್ದು, ನಿರಾಕ್ಷೇಪಣಾ ಪತ್ರ ನೀಡಲು (NOC) KPRCL ವಿಳಂಬ ಧೋರಣೆ ಅನುಸರಿಸಿದಾಗ ಸಾಗರದ ಮಾಜಿ ಶಾಸಕರಾದ ಶ್ರೀ ಹರತಾಳು ಹಾಲಪ್ಪನವರು ಬೆಂಗಳೂರು ಶಕ್ತಿಭವನದ ಎದುರು ಧರಣಿ ಸತ್ಯಾಗ್ರಹ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದಾಗ ಕರ್ನಾಟಕ ಪವರ್ ಕಾರ್ಪೋರೇಷನ್ (KPTCL) ನಿರಾಕ್ಷೇಪಣಾ ಪತ್ರ ನೀಡಿರುತ್ತದೆ.
ಆಗ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರವರು ಕೇಂದ್ರ ಅರಣ್ಯ ಸಚಿವರಾದ ಶ್ರೀ ಹರ್ಷವರ್ಧನ್ ಅವರಿಗೆ ಸೇತುವೆಯ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು, ಸೇತುವೆ ಮತ್ತು ಸಂಪರ್ಕ ರಸ್ತೆಗೆ ಅಗತ್ಯವಿರುವ ಅರಣ್ಯ ಭೂಮಿಯನ್ನು ವನ್ಯಜೀವಿ ವಿಭಾಗದಿಂದ ಬಿಡುಗಡೆಗೊಳಿಸಿ ಕೊಡಲು ಕೋರಿದ ಪ್ರಯುಕ್ತ, 2019 ರ ಫೆಬ್ರವರಿ ತಿಂಗಳಿನಲ್ಲಿ ವನ್ಯಜೀವಿ ಮಂಡಳಿಯಿಂದ ಅರಣ್ಯ ಭೂಮಿ ಬಿಡುಗಡೆಯ ಪ್ರಸ್ತಾವನೆಗೆ ಅನುಮೋದನೆ ನೀಡಿರುತ್ತಾರೆ.
ಅರಣ್ಯ ಭೂಮಿ ಬಿಡುಗಡೆ ಹಾಗೂ KPTCL ನಿರಾಕ್ಷೇಪಣಾ ಪತ್ರದ ದಾಖಲೆಗಳೊಂದಿಗೆ ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನು ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಮರು ಸಲ್ಲಿಸಿ, ಯೋಜನಾ ವರದಿಗೆ ಮಂಜೂರಾತಿಗೆ ದೊರಕಿಸಿಕೊಡಲು ಶ್ರೀ ಬಿ ಎಸ್ ಯಡಿಯೂರಪ್ಪನವರ ನೆರವಿನೊಂದಿಗೆ ಶ್ರೀ ಬಿ.ವೈ ರಾಘವೇಂದ್ರರವರು ಮಾಡಿದ ಸತತ ಪ್ರಯತ್ನದಿಂದ 28.02.2019 ರ SFC ಸಭೆಯಲ್ಲಿ ಮಂಜೂರಾತಿ ನೀಡಿ ದಿನಾಂಕ: 06.03.2019 ರಂದು ಮಂಜೂರಾತಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿರುತ್ತದೆ. ದಿನಾಂಕ: 08.03.2019 ರಂದು ಬಹು ನಿರೀಕ್ಷಿತ ಸೇತುವೆಯ ಕಾಮಗಾರಿಗೆ ಟೆಂಡರ್ ಕರೆಯಲಾಗಿರುತ್ತದೆ. ಇದಾದ ನಂತರ ದಿನಾಂಕ: 10.03.2019 ರಂದು 17 ನೇ ಲೋಕಸಭೆ ಚುನಾವಣೆಯ ಅಧಿಸೂಚನೆ ಪ್ರಕಟನೆ ಆಗಿರುತ್ತದೆ.
ಟೆಂಡರ್ ಪ್ರಕ್ರಿಯೆ ಮುಗಿದ ನಂತರ ದಿಲಿಪ್ ಬಿಲ್ಡ್ ಕಾನ್ ಗುತ್ತಿಗೆದಾರರು ಡಿಸೆಂಬರ್-2019 ರಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಮುಕ್ತಾಯಗೊಳಿಸುತ್ತಿದ್ದಾರೆ.
ಅಂಬಾರಗೋಡು-ಕಳಸವಳ್ಳಿ ಸೇತುವೆಯ ನಿರ್ಮಾಣ ಕೇವಲ ಒಂದು ಮೂಲಸೌಕರ್ಯ ಅಭಿವೃದ್ಧಿ ಕಾರ್ಯವಲ್ಲ, ಇದು ಹಳ್ಳಿಯಿಂದ ನಗರಕ್ಕೆ ನಂಬಿಕೆಯಿಂದ ಭದ್ರತೆಗೆ ಮತ್ತು ಅಸ್ಥಿರತೆಯಿಂದ ಸ್ಥಿರತೆಯತ್ತ ಸಾಗುವ ಮಾರ್ಗವಾಗಿದೆ. ಇದು ಸ್ಥಳೀಯ ಸಮುದಾಯದ ಜೀವನ ಮಟ್ಟವನ್ನು ಮೇಲಕ್ಕೆತ್ತುವ ಯೋಜನೆಯಾಗಿದೆ. ಈ ಯೋಜನೆಯ ಮಂಜೂರಾತಿಗೆ ನೆರವು ನೀಡಿದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದೀಜಿಯರಿಗೆ, ಕೇಂದ್ರ ಭೂಸಾರಿಗೆ ಮಂತ್ರಾಲದ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರಿಗೆ, ಅಂದಿನ ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ಹರ್ಷವರ್ಧನ್ ರವರಿಗೆ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ, ಯೋಜನೆಯ ಮಂಜೂರಾತಿ ಹಾಗೂ ಅನುಷ್ಟಾನದಲ್ಲಿ ಕೈಜೋಡಿಸಿದ ಎಲ್ಲಾ ಅಧಿಕಾರಿ ವರ್ಗದವರಿಗೆ ಕ್ಷೇತ್ರದ ಸಾರ್ವಜನಿಕರ ಪರವಾಗಿ ಹಾಗೂ ವೈಯಕ್ತಿಕ ಸಂಸದರಾದ ಬಿ. ವೈ. ರಾಘವೇಂದ್ರ ಕೃತಜ್ಞತೆಗಳನ್ನು ಸಲ್ಲಿಸಿದ್ದರೆ…

