ಸೆಲ್ಫಿ ವೇಳೆ ಆನೆ ದಾಳಿ, ಪ್ರಾಣ ಉಳಿಸಿಕೊಂಡವನಿಗೆ ಅರಣ್ಯ ಇಲಾಖೆ ಶಾಕ್, ಬಂಧನ.. 25 ಸಾವಿರ ರೂ ದಂಡ

ರಾಜ್ಯ ರಾಷ್ಟ್ರೀಯ
ಸೆಲ್ಫಿ ವೇಳೆ ಆನೆ ದಾಳಿ, ಪ್ರಾಣ ಉಳಿಸಿಕೊಂಡವನಿಗೆ ಅರಣ್ಯ ಇಲಾಖೆ ಶಾಕ್, ಬಂಧನ.. 25 ಸಾವಿರ ರೂ ದಂಡ
ಮೈಸೂರು: ಬಂಡೀಪುರ ಅರಣ್ಯದೊಳಗೆ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯಿಂದ ಪಾರಾಗಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು, ಆತನ ಬಂಧಿಸಿ 25 ಸಾವಿರ ರೂ ದಂಡ ಹೇರಿದೆ.
ಹೌದು.. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗಿರುವ ಕೆಕ್ಕನಹಳ್ಳ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯಿಂದ ಗಾಯಗೊಂಡು ಪರಾರಿಯಾಗಿದ್ದ ಆರೋಪಿಯನ್ನು ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು 25,000 ರೂ ದಂಡ ವಿಧಿಸಿ ಮಾತ್ರವಲ್ಲದೆ ತಪ್ಪೊಪ್ಪಿಗೆ ಪತ್ರ ಪಡೆದಿದ್ದಾರೆ.
ಕಾಡಾನೆ ಜೊತೆಗೆ ಉದ್ಧಟತನ ಪ್ರದರ್ಶಿಸಿದ್ದ ಆರೋಪಿ 50 ವರ್ಷದ ಆರ್‌.ಬಸವರಾಜ್‌ನನ್ನು ನಂಜನಗೂಡಿನ ನಿವಾಸದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ತಿಳುವಳಿಕೆ ಕೊರತೆಯಿಂದ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ತಪ್ಪೊಪ್ಪಿಗೆ ಹೇಳಿಕೆ:
ಈ ಕುರಿತು ಆರೋಪಿ ಬಸವರಾಜು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ‘ಬಂಡೀಪುರ ಬಂಕಾಪುರ ದೇವಸ್ಥಾನಕ್ಕೆ ತೆರಳಿ ಮರಳುವಾಗ ಹೆದ್ದಾರಿಯಲ್ಲಿ ಆನೆ ಕಂಡು ಮೋಜು ಮಸ್ತಿಗಾಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿಗೆ ಸಿಲುಕಿ ಬದುಕಿದ್ದೇ ಹೆಚ್ಚು ಅನಿಸಿದೆ. ಇಂತಹ ದುಸ್ಸಾಹಸವನ್ನು ಯಾರೂ ಮಾಡಬೇಡಿ, ಅರಣ್ಯದೊಳಗೆ ಹಾದುಹೋಗಿರುವ ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸಬೇಡಿ. ಶೌಚಕ್ಕೆ ಹೋಗುವುದು, ಪ್ರಾಣಿಗಳಿಗೆ ಆಹಾರ ನೀಡುವುದನ್ನು ಮಾಡಬೇಡಿ ಎಂದು ಆರೋಪಿ ಬಸವರಾಜ್ ವಿಡಿಯೊದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.