*ಬಿಗ್ ಬಾಸ್ ಕನ್ನಡ 12′ ಶೋ ಲೊಕೇಶನ್ ಶಿಫ್ಟ್; ಇನೋವೇಟಿವ್ ಫಿಲ್ಮಸಿಟಿಲಿ ನಿರ್ಮಾಣವಾಗಲಿದೆ*
ಬೆಂಗಳೂರು:
‘ಬಿಗ್ ಬಾಸ್’ ಕನ್ನಡ ಸೀಸನ್ 12ಕ್ಕೆ ಹೊಸ ಮನೆ ನಿರ್ಮಾಣ
ಸುದೀಪ್ ನಿರೂಪಣೆಯಲ್ಲಿ ಸೆಪ್ಟೆಂಬರ್ ಕೊನೆ ವಾರದಲ್ಲಿ ಬಿಗ್ ಬಾಸ್ ಶೋ
‘ಬಿಗ್ ಬಾಸ್’ ಕನ್ನಡದ ಮೊದಲ ಎರಡು ಸೀಸನ್‌ಗಳು ಪುಣೆಯಲ್ಲಿ ನಡೆದಿದ್ದವು
‘ಕಿಚ್ಚ’ ಸುದೀಪ್ ಅವರ ಸಾರಥ್ಯದಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಹೋಗಬಹುದು? ಈ ಬಾರಿ ಯಾವ ರೀತಿ ಟಾಸ್ಕ್ ಇರಬಹುದು ಎಂಬ ಕುತೂಹಲ ಇದೆ. ಸದ್ಯ ಬಿಗ್ ಬಾಸ್ ಮನೆ ಬಗ್ಗೆ ಹೊಸದೊಂದು ಅಪ್‌ಡೇಟ್ ಸಿಕ್ಕಿದೆ. ಈ ಬಾರಿ ಬಿಗ್ ಬಾಸ್ ಮನೆಯ ಲೊಕೇಷನ್ ಬದಲಾವಣೆ ಆಗಲಿದೆ.
ಮತ್ತೊಮ್ಮೆ ಬಿಗ್ ಬಾಸ್ ಮನೆ ಬದಲಾವಣೆ
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮೊದಲ ಎರಡು ಸೀಸನ್‌ಗಳನ್ನು ಪುಣೆಯ ಲೋನಾವಾಲಾದಲ್ಲಿ ನಡೆಸಲಾಯಿತು. ಮೂರನೇ ಸೀಸನ್‌ನಿಂದ ಬೆಂಗಳೂರಿನಲ್ಲೇ ಬಿಗ್ ಬಾಸ್ ಮನೆ ನಿರ್ಮಾಣ ಮಾಡಲಾಯ್ತು. ಆರಂಭದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಮನೆಯನ್ನು ವಿನ್ಯಾಸ ಮಾಡಲಾಯಿತು. ‘ಬಿಗ್ ಬಾಸ್ ಕನ್ನಡ ಸೀಸನ್ 3’ ರಿಂದ ‘ಬಿಗ್ ಬಾಸ್ ಕನ್ನಡ 9’ ವರೆಗಿನ ಶೋಗಳು ಹಾಗೂ ‘ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1’ ಕೂಡ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲೇ ನಡೆದಿತ್ತು.
ಆ ಬಳಿಕ ಅಲ್ಲಿಂದ ಲೊಕೇಷನ್ ಅನ್ನು ಶಿಫ್ಟ್ ಮಾಡಲಾಯಿತು. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಿಸಲಾಗಿತ್ತು, ಮನೆಯ ಇಂಟೀರಿಯರ್ಸ್ ಹಾಗೂ ಡೆಕೋರೇಷನ್‌ನಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ಅಲ್ಲಿಯೂ ಒಂದಷ್ಟು ಸೀಸನ್‌ಗಳನ್ನು ನಡೆಸಲಾಗಿದೆ.
ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಮನೆ ನಿರ್ಮಾಣ
ಇದೀಗ ಮತ್ತೊಮ್ಮೆ ಮನೆ ಬದಲಾವಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಪುನಃ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಮರಳಲಾಗುತ್ತಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಶೋಗಾಗಿ ಹೊಸ ಮನೆಯನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಬಾರಿ ಹೊಸ ಮನೆ ಹೇಗಿರಲಿದೆ? ವಿನ್ಯಾಸದಲ್ಲಿ ಮತ್ತಷ್ಟು ವಿಶೇಷತೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
*ಯಾವಾಗ ಶುರುವಾಗಲಿದೆ*
ಬಿಗ್ ಬಾಸ್ ಕನ್ನಡ 12 ಶೋವನ್ನು ಈ ಬಾರಿ ಸೆಪ್ಟೆಂಬರ್ ಕೊನೇ ವಾರದಿಂದ ಆರಂಭಿಸಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಸುದೀಪ್ ಕೂಡ ಹಿಂದೊಮ್ಮೆ ಸೆಪ್ಟೆಂಬರ್‌ನಲ್ಲಿ ಬಿಗ್ ಬಾಸ್ ಆರಂಭವಾಗುವ ಬಗ್ಗೆ ಸಣ್ಣ ಹಿಂಟ್ ನೀಡಿದ್ದರು.